November 1, 2024

Chitradurga hoysala

Kannada news portal

ಬಾರ್‌ ಮುಚ್ಚುವಂತೆ ಆಗ್ರಹಿಸಿ ತಹಶೀಲ್ದಾರ್ ಕಾರಿಗೆ ಘರಾವ್ ಹಾಕಿದ ಗ್ರಾಮಸ್ಥರು

1 min read

ಬಾರ್‌ ಮುಚ್ಚುವಂತೆ ಆಗ್ರಹಿಸಿ ತಹಶೀಲ್ದಾರ್ ಕಾರಿಗೆ ಘರಾವ್ ಹಾಕಿದ ಗ್ರಾಮಸ್ಥರು

ಚಿತ್ರದುರ್ಗ ಹೊಯ್ಸಳ ನ್ಯೂಸ್:

ಚಳ್ಳಕೆರೆ:

ತಾಲೂಕಿನ ಗೌರಸಮುದ್ರ ಗ್ರಾಮದ ಮಧ್ಯಭಾಗದಲ್ಲಿನ ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ, ಮದ್ಯದಂಗಡಿಗೆ ಬೀಗ ಹಾಕಿ ಗ್ರಾಮಸ್ಥರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಕಾರಿಗೆ ಘರಾವ್ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ಮಧ್ಯಭಾಗದಲ್ಲಿ ಬಾರ್ ಇರುವುದನ್ನ ಖಂಡಿಸಿ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಕೂಡಲೇ ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್ ಬೇರೆಡೆ ಶಿಫ್ಟ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ರೆಹಾನ್ ಪಾಷಾ ಭೇಟಿ ನೀಡಿದ್ದರು. ಈ ವೇಳೆ ಬಾ‌ರ್ ಮುಚ್ಚುವಂತೆ ಮಹಿಳೆಯರು ತಹಶಿಲ್ದಾರ್ ಕಾರುಗೆ ಘರಾವ್ ಹಾಕಿ, ಬಾರ್ ಮುಚ್ಚುವಂತೆ ಆಗ್ರಹಿಸಿದರು.

ಸೋಮವಾರ ರಾತ್ರಿ ಮಳೆ ಬಂದರೂ ಲೆಕ್ಕಿಸದೆ ಭಜನೆ ಮಾಡಿಕೊಂಡು ಧರಣಿ ನಡೆಸಿರುವ ಗ್ರಾಮಸ್ಥರು, ಜಿಲ್ಲಾಡಳಿತ ತಕ್ಷಣವೇ ಕ್ರಮ ಕೈಗೊಂಡು ಬಾರ್ ಅನ್ನು ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಗ್ರಾಮದೊಳಗೆ ಕಾಲಿಡಬಾರದು ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಪಂ ವತಿಯಿಂದ ಎನ್‌ಒಸಿ ಇಲ್ಲದೆ ಅಕ್ರಮವಾಗಿ ಬಾರ್ ತೆರೆಯಲಾಗಿದೆ. ಅನಧಿಕೃತ ಮದ್ಯ ಮಾರಾಟದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಕೂಲಿ ಮಾಡಿ ಜೀವನ ಮಾಡುವ ಕುಟುಂಬಗಳಿಗೆ ತೀವ್ರ ಸಂಕಷ್ಟವಾಗಿದೆ. ತಪ್ಪಿತಸ್ಥ ಬಾರ್ ಮಾಲೀಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ಗೆ ಮುತ್ತಿಗೆ: ಧರಣಿನಿರತ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರೇಹಾನ್ ಪಾಷಾ ಕಾರ್‌ಗೆ ಅಡ್ಡಗಟ್ಟಿದ ಮಹಿಳೆಯರು, ಐದಾರು ವರ್ಷಗಳಿಂದ ಅನಧಿಕೃತವಾಗಿ ನಡೆಸುತ್ತಿರುವ ಬಾರ್ ಬಗ್ಗೆ ಈ ದಿನ ಗೊತ್ತಾಗಿದೆ ಎಂದು ಹೇಳಲು ಬಂದಿರುವುದನ್ನು ಸಹಿಸುವುದಿಲ್ಲ. ಹಲವು ಬಾರಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಎಂ.ಓಬಣ್ಣ, ವಕೀಲ ಎಂ.ಚಂದ್ರಣ್ಣ, ಟಿ.ಶಶಿಕುಮಾರ್, ರಾಜಶೇಖರ, ಸುಭಾಷಿಣಿ, ಭಾಗ್ಯಮ್ಮ, ಶಶಿರೇಖಾ, ಮಲ್ಲಮ್ಮ, ಕೆ.ಬಿ.ಮಾರಪ್ಪ, ಜ್ಯೋತಿ, ಗೌರಯ್ಯ, ಈರಕ್ಕ, ಭೀಮಣ್ಣ, ಮಹಾಂತೇಶ, ಮಂಜಣ್ಣ ಇದ್ದರು.

About The Author

Leave a Reply

Your email address will not be published. Required fields are marked *