ಆತ್ಮೀಯ ಅಸ್ಪೃಶ್ಯ ಮಾದಿಗ ಹಾಗೂ ಛಲವಾದಿ ಬಂಧುಗಳೇ,
1 min readಆತ್ಮೀಯ ಅಸ್ಪೃಶ್ಯ ಮಾದಿಗ ಹಾಗೂ ಛಲವಾದಿ ಬಂಧುಗಳೇ,
ಚಿತ್ರದುರ್ಗ ಹೊಯ್ಸಳ ಸುದ್ದಿ:
ಸಂವಿಧಾನದ ಪ್ರಧಾನ ಆಶಯವಾಗಿರುವ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಉದ್ದೇಶದಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಹೀಗೆ ಸಾರ್ವಜನಿಕ ಜೀವನದ ಎಲ್ಲ ರಂಗಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ತತ್ವವನ್ನು (PRINCIPLE OF ADEQUATE REPRESENTATION) ಅಳವಡಿಸಿ ಮೀಸಲಾತಿ ಸೌಲಭ್ಯವನ್ನು ಶಾಸನಬದ್ಧವಾಗಿ ಜಾರಿಗೆ ತರಲಾಗಿದೆ.
ಭಾರತೀಯ ಸಮಾಜದಲ್ಲಿ ಅತ್ಯಂತ ಅಮಾನವೀಯವಾದ ಅಸ್ಪೃಶ್ಯತೆ ಆಚರಣೆ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯಾನಂತರ ಅಸ್ಥಿತ್ವಕ್ಕೆ ಬಂದ ಭಾರತ ಸಂವಿಧಾನವು ಅಸ್ಪೃಶ್ಯತೆಯ ಆಚರಣೆಯನ್ನು ಅದರ ಎಲ್ಲ ರೂಪಗಳಲ್ಲಿ ನಿಷೇಧಿಸಿದೆ. ಸಾವಿರಾರು ವರ್ಷಗಳ ಅಮಾನುಷಕಾರಿ ಶೋಷಣೆಗೆ ತುತ್ತಾಗಿರುವ ಅಸ್ಪೃಶ್ಯರ ಶ್ರೇಯೋಭಿವೃದ್ಧಿಗಾಗಿಯೇ ಮೀಸಲಾತಿ ಸೌಲಭ್ಯವನ್ನು ಸಂವಿಧಾನಾತ್ಮಕ ವಾಗಿ ಕಲ್ಪಿಸಲಾಗಿದೆ. ಆದರೆ ಕಾಲಾಂತರದಲ್ಲಿ ಅಸ್ಪೃಶ್ಯ ಜಾತಿಗಳನ್ನು ಸೃಶ್ಯ ಜಾತಿಗಳ ಪಟ್ಟಿಯಲ್ಲಿ ಸೇರಿಸಿದ್ದರಿಂದ ಮೀಸಲಾತಿ ನೀತಿಯ ಮೂಲ ಉದ್ದೇಶವೇ ವಿಫಲಗೊಂಡಿತು ಮತ್ತು ಅದರ ಭೀಕರ ದುಷ್ಪರಿಣಾಮ ಅಸ್ಪೃಶ್ಯ ಮಾದಿಗ ಸಮುದಾಯದ ಮೇಲೆ ಉಂಟಾಯಿತು. ಇದರಿಂದಾಗಿ ನೊಂದು ಬೆಂದ ಮಾದಿಗ ಸಮುದಾಯವು ವೈಜ್ಞಾನಿಕ ಸ್ವರೂಪದ ಆಂತರಿಕ ಮೀಸಲಾತಿಗಾಗಿ ಕಳೆದ 30 ವರ್ಷಗಳಿಂದ ಪ್ರತಿಭಟನೆ ಮಾಡುತ್ತ ಕಾನೂನು ಹೋರಾಟವನ್ನೂ ನಡೆಸುತ್ತ ಬಂದಿದ್ದಾರೆ. ಮೂರು ದಶಕಗಳ ನಿರಂತರ ಹೋರಾಟದಿಂದ ಮಾದಿಗ ಸಂಘಟನೆಗಳು ಮಾನಸಿಕ ದೈಹಿಕ ಚಿತ್ರಹಿಂಸೆಗೆ ಒಳಗಾಗುತ್ತ ಹೋರಾಟ ಗಾರರು ತಮ್ಮ ಅಮೂಲ್ಯ ಪ್ರಾಣಗಳನ್ನೂ ಕಳೆದುಕೊಂಡಿದ್ದಾರೆ. ಈ ಹೋರಾಟದ ಪರಿಣಾಮವಾಗಿ ಕರ್ನಾಟಕ ಸರ್ಕಾರ ನ್ಯಾ. ಎ. ಜೆ. ಸದಾಶಿವ ಆಯೋಗವನ್ನು ರಚಿಸಿ ಅದರ ವರದಿಯನ್ನು ಪಡೆದಿದೆ. ತದನಂತರ ಸರ್ಕಾರ ಒಳ ಮೀಸಲಾತಿ ಕುರಿತು ಸಂಪುಟದ ಉಪ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು.ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕೆಂದು ಮಾನ್ಯ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಸದರಿ ದತ್ತಾಂಶಗಳು ನ್ಯಾ. ಎ.ಜೆ. ಸದಾಶಿವ ಆಯೋಗ, ಕಾಂತರಾಜು ವರದಿ, ನ್ಯಾ. ನಾಗಮೋಹನದಾಸ್ ಆಯೋಗ ಮತ್ತು ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿಯ ವರದಿಗಳಲ್ಲಿ ಲಭ್ಯವಿವೆ. ಆದ್ದರಿಂದ ಸರ್ಕಾರ ಇನ್ನೂ ಹೆಚ್ಚಿನ ವಿಳಂಬ ತೋರದೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಒತ್ತಾಯಿಸಲಾಗಿದೆ.
ತಮ್ಮ ನ್ಯಾಯಯುತ ಬೇಡಿಕೆಯ ದಾವೆಯನ್ನು ಹೋರಾಟಗಾರರು ಗೌರವಾನ್ವಿತ ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಿದ್ದರು. 7 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಒಳಮೀಸಲಾತಿ ಬೇಡಿಕೆಯ ಸಮಂಜಸತೆಯನ್ನು ಮನಗಂಡು ಆಂತರಿಕ ಮೀಸಲಾತಿಯನ್ನು ಕಲ್ಪಿಸುವುದು ಸಂವಿಧಾನ ಬದ್ಧವಾಗಿದೆ ಎಂದು 01.08.2024 ರಂದು ಐತಿಹಾಸಿಕವಾದ ತೀರ್ಪು ನೀಡಿದೆ.
ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ವಹಿಸಿದೆ. ಅಲ್ಲದೇ ಈ ಕುರಿತು ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲವೆಂದು ಉಲ್ಲೇಖಿಸಿದೆ. ಸುಪ್ರೀಂ ಕೋರ್ಟಿನ ಪ್ರಸ್ತುತ ತೀರ್ಪನ್ನು ಮರುಪರಿಶೀಲಿಸಲು ಸಲ್ಲಿಸಲಾಗಿದ್ದ ಮನವಿಗಳನ್ನೂ ಸಹ ಮಾನ್ಯ ನ್ಯಾಯಪೀಠ ವಜಾಗೊಳಿಸಿದೆ.
ಪರಿಶಿಷ್ಟ ಜಾತಿಗಳು ಏಕರೂಪಿಯಾಗಿಲ್ಲವೆಂದು ಹೇಳಿದ ಸುಪ್ರೀಂ ಕೋರ್ಟ್, ಆಯಾ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ಒದಗಿಸುವುದು ಸಂವಿಧಾನ ಬದ್ಧವಾಗಿದೆ ಎಂದು ಉಚ್ಚರಿಸಿದೆ. ಸುಪ್ರೀಂ ಕೋರ್ಟಿನ ತೀರ್ಪು ಬರುವವರೆಗೆ, ಒಳಮೀಸಲಾತಿ ವಿಚಾರದಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳು ಸಕಾರಾತ್ಮಕ ನಿಲುವು ತೋರುತ್ತ ಬಂದಿದ್ದವು. ಚುನಾವಣೆ ಸಂದರ್ಭದಲ್ಲಿ ಕಪಟ ಭರವಸೆ ನೀಡುತ್ತ ಮತಗಳನ್ನೂ ಬಾಚಿಕೊಂಡು ಅಧಿಕಾರದ ಗದ್ದುಗೆ ಏರಿದ ಮೇಲೆ ಅಸ್ಪೃಶ್ಯರನ್ನು ಕಡೆಗಣಿಸುತ್ತ ಬಂದಿವೆ.
ಅಸ್ಪೃಶ್ಯ, ಅಲೆಮಾರಿ, ಅರೆ ಅಲೆಮಾರಿ ಜಾತಿಗಳ ಜನರಿಗೆ ಆಶಾಕಿರಣವಾಗಿರುವ ಹಾಗೂ ದೇಶಾದ್ಯಂತ ಅನ್ವಯಿಸುವ ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದು ಮೂರು ತಿಂಗಳಾಗುತ್ತ ಬಂದರೂ ಕರ್ನಾಟಕ ಸರ್ಕಾರ ಅದನ್ನು ಕೇವಲ ‘ತುಟಿ ಸಹಾನುಭೂತಿ’ಯಿಂದ ಸ್ವಾಗತಿಸಿ, ತೀರ್ಪಿನ ಜಾರಿಗಾಗಿ ಮೀನ ಮೇಷ ಎಣಿಸುತ್ತಿದೆ.
ದಿನಾಂಕ 23.10.2024ರ ಬುಧವಾರ ಬೆಳಿಗ್ಗೆ 11 ಘಂಟೆಗೆ ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ, ಅಶೋಕ ರಸ್ತೆ ಮಾರ್ಗವಾಗಿ ಗಾಂಧಿ ಸರ್ಕಲ್ ಮೂಲಕ A C ಆಫೀಸಿಗೆ ಬೃಹತ್ ಪ್ರತಿಭಟನೆ ಮೂಲಕ ಸಾಗಿ ಮಾನ್ಯ ಜಿಲ್ಲಾಧಿಕಾರಿಗಳ ಮುಖೇನ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸುವ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಒಳ ಮೀಸಲಾತಿಯ ತ್ವರಿತ ಅನುಷ್ಠಾನಕ್ಕಾಗಿ ಛಲವಾದಿ ಮತ್ತು ಮಾದಿಗ ಬಂಧುಗಳು ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಪೌರ ಕಾರ್ಮಿಕರು ಮತ್ತು ಮುಖಂಡರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ವಿನಂತಿ.